भाष्यपीयूषधारा कृष्ण‌ कमल वेदान्तपाठशाला Krishna Kamala Vedanta Pathashala

Play Audio Your browser does not support the audio tag.
>> Go Back

ಗಿರಿಗಹ್ವರ-ನದೀತಟಾಕಾದಿ ಮನೋಹರವಾದ ಪ್ರಕೃತಿಯಿಂದ ಕೂಡಿ ಅಲೌಕಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ರತ್ನಗರ್ಭವಸುಂಧರೆಗೆ ತಿಲಕಪ್ರಾಯವಾಗಿ ಶೋಭಾಯಮಾನವಾಗಿರುವುದೇ ನಮ್ಮ ಭಾರತವರ್ಷ. ಅನ್ಯಾದೃಶವಾದ ಇಲ್ಲಿನ ಸನಾತನಸಂಸ್ಕತಿಯನ್ನು ಪ್ರತಿಬಿಂಬಿಸಿ ವಿಕಾಸಗೊಳಿಸಿರುವ ಅನೇಕಾನೇಕ ದಾರ್ಶನಿಕರು, ಮಹಾತ್ಮರು ಈ ಪುಣ್ಯಭೂಮಿಯಲ್ಲಿ ಅವತರಿಸಿ ಇದನ್ನು ಪಾವನಗೊಳಿಸಿರುತ್ತಾರೆ. ಇಂಥ ನಮ್ಮ ಭಾರತವರ್ಷವು ಸಕಲಮಾನವರ ಅಭ್ಯುದಯನಿಃಶ್ರೇಯಸಗಳಿಗೆ ಉಪಾಯವಾಗಿರುವ ಉಪನಿಷತ್ತುಗಳೇ ಮುಂತಾದ ಎಲ್ಲ ಸಾಹಿತ್ಯಪ್ರಕಾರಗಳ ಆಗರ, ಜ್ಞಾನಸಾಗರ. ಅಪೌರುಷೇಯವಾದ ವೇದಗಳ ಶಿರಃಸ್ಥಾನದಲ್ಲಿದ್ದು, ಸಾರಭೂತವೂ ಪ್ರಮಾಣಭೂತವೂ ಆಗಿರುವ ಸಾಹಿತ್ಯಪ್ರಕಾರವೇ ವೇದಾನ್ತಗಳೆಂದು ವಿಶ್ವಮಾನ್ಯವಾಗಿ ಪ್ರಸಿದ್ಧವಾಗಿವೆ. ಇವೆಲ್ಲವೂ ದೇವಭಾಷೆಯಲ್ಲಿದ್ದು ಸಾಮಾನ್ಯಜನರಿಗೆ ಸುಲಭಗ್ರಾಹ್ಯವಾಗಿರುವುದಿಲ್ಲ. ಆದ್ದರಿಂದ ಸಮಸ್ತಮಾನವರೂ ಈ ಉಪನಿಷತ್ತತ್ತ್ವಗಳನ್ನು ತಿಳಿದು ಕೃತಾರ್ಥರಾಗಲಿ ಎಂಬ ಉದ್ದೇಶದಿಂದ ಭಗವಾನ್ ವೇದವ್ಯಾಸರು 7೦೦ ಶ್ಲೋಕಗಳಿಂದ ಕೂಡಿ ಲೋಕಪ್ರಸಿದ್ಧವಾಗಿರುವ ಭಗವದ್ಗೀತೆಯೆಂಬ ಹೆಸರಿನ ಗ್ರನ್ಥವನ್ನು ರಚಿಸಿರುತ್ತಾರೆ. ಹೀಗೆ, ಉಪನಿಷತ್ತು ಹಾಗೂ ಭಗವದ್ಗೀತೆಗಳಲ್ಲಿ ಪ್ರತಿಪಾದಿತವಾಗಿರುವ ತತ್ತ್ವಗಳನ್ನೇ ಭಗವಾನ್ ವೇದವ್ಯಾಸರು ಸೂತ್ರರೂಪದಿಂದ ಪ್ರತಿಬಿಂಬಿಸಿರುತ್ತಾರೆ. ಈ ಗ್ರನ್ಥವೇ ಬ್ರಹ್ಮಸೂತ್ರಗಳು, ಶಾರೀರಕಮೀಮಾಂಸೆ, ವೇದಾನ್ತಶಾಸ್ತ್ರ, ಬಾದರಾಯಣೀಯವೇದಾನ್ತಸೂತ್ರಗಳು, ಚತುರ್ಲಕ್ಷಣೀ ಮುಂತಾದ ಹೆಸರುಗಳಿಂದ ವಿಶ್ವಮಾನ್ಯವೂ ಜಗದ್ವಂದ್ಯವೂ ಆಗಿ ಕಂಗೊಳಿಸುತ್ತಿದೆ. ಆದರೆ ಇವುಗಳು ಸೂತ್ರರೂಪದಲ್ಲಿರುವುದರಿಂದ ಇವುಗಳ ಯಥಾರ್ಥವನ್ನು ಗ್ರಹಿಸಿ ತತ್ವವನ್ನು ಅರಿಯುವುದು ವಿದ್ವಾಂಸರಿಗೂ ಕೂಡ ಕಷ್ಟಸಾಧ್ಯವಾಗಿರುತ್ತದೆ. ಅದಕ್ಕಾಗಿಯೇ ಪರಮೇಶ್ವರನ ಅಂಶಸಂಭೂತರಾದ ಆಚಾರ್ಯಶಂಕರಭಗವತ್ಪಾದರು ಈ ಗಹನವಾದ ಸೂತ್ರಪ್ರಸ್ಥಾನವನ್ನು 555 ಸೂತ್ರಗಳನ್ನಾಗಿ ವಿಭಜಿಸಿ ಆ ವೇದಾನ್ತಸೂತ್ರಗಳಿಗೆ ಪ್ರಸನ್ನವೂ ಗಂಭೀರವೂ ಆದ ಭಾಷ್ಯವನ್ನು ಅನುಗ್ರಹಮಾಡಿರುತ್ತಾರೆ. ಇದನ್ನು ಶ್ರೋತ್ರಿಯನೂ ಬ್ರಹ್ಮನಿಷ್ಠನೂ ಆದ ಗುರುವಿನ ಮುಖದಿಂದಲೇ ತಿಳಿಯಬೇಕು. ಇದು ಈ ಯಾನ್ತ್ರಿಕ ಯುಗದಲ್ಲಿ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೂ, ಪದಗಳನ್ನು ಸರಿಯಾದ ಕ್ರಮದಲ್ಲಿ ವಿಭಜಿಸಿ ಓದುವ ವಿಧಾನದಿಂದಲೇ ಬಹುಮಟ್ಟಿಗೆ ಯಥಾರ್ಥವನ್ನು ಗ್ರಹಿಸಬಹುದಾಗಿದೆ. ಈ ಯಾನ್ತ್ರಿಕಯುಗದಲ್ಲಿ ಇದಕ್ಕಿರುವ ಅವಕಾಶವೂ ಕಡಿಮೆಯೇ. ಹಾಗಾಗಿ ಶ್ರವಣಮಾಧ್ಯಮದಲ್ಲಿದ್ದರೆ ಎಲ್ಲೇ ಇದ್ದರೂ ಯಾವುದೇ ಸಮಯವಾದರೂ ಕೇಳುವ ಮೂಲಕವಾಗಿಯಾದರೂ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದೆಲ್ಲವನ್ನೂ ಗಣನೆಗೆ ತಂದುಕೊಂಡು ಕೃಷ್ಣಕಮಲವೇದಾನ್ತಪಾಠಶಾಲೆಯು ಈ ಎಲ್ಲ ಸೌಲಭ್ಯವಿರುವ ಒಂದು ಮೊಬೈಲ್ ಆಪ್ ಅನ್ನು ಸಿದ್ಧಪಡಿಸಿ ತಮ್ಮ ಮುಂದೆ ಸಮರ್ಪಿಸಿದೆ. ಇದರಲ್ಲಿ 7 ಮುಖ್ಯವಾದ ಉಪನಿಷತ್ತುಗಳ ಮನ್ತçಭಾಗಗಳು, ಭಾಷ್ಯಭಾಗಗಳು, ವೇದಾನ್ತಸೂತ್ರಗಳು ಮತ್ತು ಅದರಲ್ಲಿನ ಅಧಿಕರಣಪಂಚಕಕ್ಕೆ ಆಚಾರ್ಯ ಶ್ರೀಮಚ್ಛಂಕರಭಗವತ್ಪೂಜ್ಯಪಾದರು ಅನುಗ್ರಹಿಸಿರುವ ಭಾಷ್ಯಭಾಗಗಳು ಇವೆಲ್ಲವೂ ದೇವನಾಗರಿಲಿಪಿಯಲ್ಲಿ ಸೂಕ್ತವಾಗಿ ಪದಗಳ ವಿಭಾಗಕ್ರಮದಿಂದ ಪಠ್ಯವಾಗಿಯೂ ಮತ್ತು ಶ್ರವಣಮಾಧ್ಯಮದಲ್ಲೂ ಲಭ್ಯವಾಗಿವೆ. ಬನ್ನಿ, ತಮ್ಮೆಲ್ಲರಿಗೂ ಸುಸ್ವಾಗತ.

© 2023 KKP APP. All rights reserved | Design by SMDS